ಮಗನ ಔಷಧಿಗೆ ಮೂರು ದಿನಗಳ ಕಾಲ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ! | ಜನತಾ ನ್ಯೂಸ್
ಮೈಸೂರು : ಲಾಕ್ಡೌನ್ನಿಂದ ಮಗನಿಗೆ ಔಷಧಿ ತರಲು ಪರಿಪಾಡಲು ಪಟ್ಟ ತಂದೆಯೊಬ್ಬರು ಬರೋಬ್ಬರು 280 ಕಿ.ಮೀ ಸೈಕಲ್ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್ ಮನಗ ಚಿಕಿತ್ಸೆಗಾಗಿ ಸತತ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ.
ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ.
ಆಟೋ, ವ್ಯಾನ್ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಕೇಳಿ ನೋಡಿದ್ದಾರೆ. ಆದರೆ, ಯಾವುದೇ, ವಾಹನಗಳು ಬಾಡಿಗೆಗೆ ಸಿಕಿಲ್ಲ. ಅಲ್ಲದೇ, ತಮ್ಮ ಪರಿಚಯಸ್ಥರಲ್ಲಿ ಕೂಡ ಬೈಕ್ ನೀಡುವಂತೆ ಸಹಾಯ ಕೋರಿದರು. ಲಾಕ್ಡೌನ್ ಭೀತಿ ಬೈಕ್ ಸೀಜ್ ಆದರೆ, ಎಂದು ಅವರ ಸ್ನೇಹಿತರು ಹಿಂದೆ ಮುಂದೆ ನೋಡಿದ್ದಾರೆ.
ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಮ್ಮೆ ಮಾತ್ರೆ ತಪ್ಪಿದರೆ 18 ವರ್ಷ ಮತ್ತೆ ಮಾತ್ರೆ ನೀಡಬೇಕಾಗುತ್ತದೆ ಎಂಬ ಆತಂಕದಲ್ಲಿ ಸೈಕಲ್ನಲ್ಲಿ ನೂರಾರು ಕಿಲೋಮೀಟರ್ ಹೋಗಿ ಔಷಧಿ ತಂದಿದ್ದಾರೆ.
ಆನಂದ್ ಪ್ರತಿ ಬಾರಿಯೂ ತಪ್ಪಿಲ್ಲದೆ ಮಾತ್ರೆಗಳನ್ನು ತಂದುಕೊಡುತ್ತಿದ್ದರು. ಆದರೆ ಈ ಬಾರಿ ಮಗನಿಗೆ ಔಷಧಿ ತರಲು ಲಾಕ್ ಡೌನ್ ಅಡ್ಡಿಯಾಗಿತ್ತು. ಮೈಸೂರಿನಿಂದ ಬೆಂಗಳೂರಿಗೆ ಬೈಕ್, ಆಟೋ ಹಾಗೂ ವಾಹನ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ಸತತ ಮೂರು ದಿನಗಳ ಕಾಲ ಆನಂದ್ ಸೈಕಲ್ ತುಳಿದಿದ್ದಾರೆ.
ತನ್ನ ಸೈಕಲ್ ಏರಿ ಹೊರಟ ಆನಂದ್ ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ.